ಸಾವಿತ್ರಮ್ಮನ ಮೆಸ್
June 2, 2008 at 9:34 am (ಮನಸಿನ ಪುಟಗಳು)
ಕೃಷ್ಣ ಟಾಕಿಸ್ ನಿಂದ ಬಲಕ್ಕೆ ಎರಡನೆಯ ಕ್ರಾಸ್ ನಲ್ಲಿದೆ ಸಾವಿತ್ರಮ್ಮನ ಮೆಸ್. ಅದರಿಂದ ಒಂದು ರೋಡ್ ಎಡಕ್ಕೆ ಭಟ್ಟ್ರುದ್ದು. ರಾತ್ರಿ ಎಂಟು ವರೆ ಗಂಟೆಗೆ,ಒಳಗೆ ಉರಿಯುತಿದ್ದ ಒಂದೇ ಒಂದು ಅರವತ್ತು ಕ್ಯಾಂಡಲ್ ಬಲ್ಬಿನ ಪ್ರಕಾಶದಲ್ಲಿ ಮಂದ ಗತಿಯಲ್ಲಿ
ಊಟ ಸಾಗುತ್ತಿದೆ.
“ನೀನು ಗರತಿ ಯಂಗೆ ಸೆರಗಾಕ್ಕೊನ್ಡು ಲಾರಿಯೊಳಗೆ ಕುಂತಿದ್ರೆ, ನಿನ್ನ ಯಾರು ಮೂಸುತ್ತಾರೆ ನಿಂಗವ್ವೋ….” ಅಂತ ಸ್ಪೀಕರ್ ನಲ್ಲಿ ಸಣ್ಣದಾಗಿ ಹಾಡು.
ಈ ಸೇಲ್ಸ್, ರೆಪ್ ಗಳ ಗ್ಯಾಂಗ್ ಬರೋ ತಂಕ ವಾತಾವರಣ ಕಾಮ್ ಆಗಿರುತ್ತೆ ಅಂತ ಅಲ್ಲಿ ಬರೊ ಎಲ್ಲ ರೆಗ್ಯುಲರ್ ಕಸ್ಟಮರ್ಸ್‌ಗಳಿಗೂ ಗೊತ್ತು. ಟೇಬಲ್ ಕ್ಲೀನ್ ಮಾಡೋವಾಗ ಕ್ಲೀನರ್ ಪ್ರಕಾಶ, ಕೈ ತಪ್ಪಿ ಒಂದು ಲೋಟ ಬೀಳ್ಸಿ ಬಿಟ್ಟ“ಏಯ್, ಬೋ …ಮಗನೆ ನೋಡ್ಕೊಂಡು ಕೆಲ್ಸಾ ಮಾಡೋ” ಅಂತ ಗುಡುಗಿದ ಸಾವಿತ್ರಮ್ಮನ ಗಂಟಲು ಅಲ್ಲಿದ್ದ ಎಲ್ಲರನ್ನೂ ಬಲವಾಗಿ ಕುತ್ತಿಗೆ ಹಿಡಿದು ದಬ್ಬಿದಂತಾಯಿತು.
ಸಣ್ಣ ದಾಗಿ ಹನಿಯುತ್ತಿದ್ದ ಮಳೆಯಲ್ಲಿ ಬೈಕ್‌ಗಳ ಸದ್ದಿನ ಜೊತೆ, ಸಾವಿತ್ರಮ್ಮನ ಮೆಸ್ ರೆಗ್ಯುಲರ್ ಗಿರಾಗಿಗಳಾದ , ಸೇಲ್ಸ್ ರೆಪ್ ಗಳ ತಂಡ ಬಂದಿತು. ಇವತ್ತು ಅವರಜೊತೆಯಲ್ಲಿ ಇಬ್ಬರು ಹೊಸ ಹುಡುಗರು ಸಹ ಇದ್ದರು. ಕಪ್ಪಗೆ ಹೊಳೆಯುವ ಶೂಸ್ ಹಾಕಿ ತುಂಬು ತೋಳಿನ ಅಂಗಿ ಹಾಗೂ ಪ್ಯಾಂಟ್ ಧಾರಿಗಳಾಗಿದ್ದರು, ಅವರ ಮುಖದಲ್ಲಿ, ಹೊಸದಾಗಿ ಹಳ್ಳಿ ಇಂದ ಬಂದ ಮುಗ್ಧ ತನವಿತ್ತು. ಮಹಾನಗರದ, ತಳಕು , ಬಳುಕು, ವೈಯಾರಗಳಿಗೆ, ಕನ್ನಿಂಗ್ ನೆಸ್ ಗೆ ಮೈ ಮನಸ್ಸು ಗಳೆರಡು ಹೊಂದಿ ಕೊಂಡಿಲ್ಲವೆಂದು ಸ್ಪಷ್ಟ್ಟತೋರುತಿತ್ತು.
ಗುಂಪಿನಲ್ಲೇ ದೊಡ್ಡವನಾದ ಸೀನಿಯರ್ ಮಾರ್ಕೆಟಿಂಗ್ ಆಫೀಸರ್ ಸುರೇಶ Water purifier ಮಾರುತಿದ್ದ. ಅವನ ಜೊತೆಇದ್ದ ಇನ್ನಿಬ್ಬರು ಮೆಡಿಕಲ್ ರೆಪ್ ಗಳು, ಜೊತೆಗೆ ಕೆಲಸ ಹುಡುಕಿಕೊಂಡು ಬಂದಿದ್ದ ಇನ್ನಿಬ್ಬರು.
“ಸಾವಿತ್ರಮ್ಮನ ಸಾರಿನ ಮುಂದೆ, ಆ ಭಟ್ಟಂದು ಏನು? , ಒಂದತ್ತು
ಜನ ಓದೋ ಹುಡುಗರು ಹೋಗ್ತಾರೆ ಅನ್ನೋದ್ ಬಿಟ್ರೆ, ಇನ್ಯಾರಿಗೂ ಆ ನನ್ನ್ ಮಗಂದು ಇಷ್ತ್ತಾನೆ ಆಗಲ್ಲ“, ಅಂತ ಸಾವಿತ್ರಮ್ಮನಿಗೆ ಉಬ್ಬಿಸ್ತನೆ ಸುರೇಶ ಒಳಗಡೆ ಬಂದ, ಅವಳಿಗೂ ಗೊತ್ತಿತ್ತು, ಇವನು ಬಾಕಿ ಕೊಡದು, ತಡ ಮಾಡಕ್ಕೆ ಹೀಗೆಲ್ಲ ಮಾಡದು ಅಂತ. ಊಟ ಶುರುವಾಯಿತು, ಅಗಲೆ ಒಂದೆರಡು ಕ್ವಾರ್ಟರ್ ಹಾಕಿದ್ದ ಸುರೇಶನ ಸಂಗಡಿಗರು, “ಏನ್ ಸಾವಿತ್ರಕ್ಕಾ ಇವತ್ತು ಸಾರು ಖಾರ ನೇಇಲ್ಲ“ ಅಂತ ಶುರುಮಾಡಿದರು.
ಇವರೆಲ್ಲರ ಮಧ್ಯದಲ್ಲಿ, ಕೂತಿದ್ದ , ಸುರೇಶ ಹೊಸಬರನ್ನುದೇಶಿಸಿ, ಮಾತನಾಡತೊಡಗಿದ. “ ನೊಡ್ರಪ್ಪ, ಮೊದ್ ,ಮೊದ್ಲು ಸ್ವಲ್ಪ ಕಷ್ಟ ಪಡ್ ಬೇಕು, ಆಮೇಲೆ ರಾಜನ್ ಹಾಗೆ ಇರ್ಬಹುದು, ಈಗ ನನ್ನೇ ನೋಡಿ, ಅವತ್ತು ಅನಂತ ಪುರದಿಂದ ಇಲ್ಲಿಗೆ ಬಂದಾಗ ನನಗೆ ಬರೆ ಎರಡು ಸಾವಿರ ಸಂಬಳ ಇತ್ತು, ಆದ್ರೆ ಇವತ್ತು, ಪೆಟ್ರೋಲ್ ಅಲೋವೆನ್ಸ್ ಎಲ್ಲ ಸೇರಿ ಬರೋಬ್ಬರಿ ಹದಿನೈದು ಸಾವಿರ ತೊಗೊತಿನಿ. ಧೈರ್ಯ ವಾಗಿರಿ, ಮಾರೋದು ಅಂದ್ರೆ ಮಾರದೇ, ಏನು ಬೇಕಾದ್ರೂ ಮಾರ್ಬೋದು ಗೊತ್ತಾ, ಸ್ವಲ್ಪ ಇಂಗ್ಲೀಷ್ ಕಲ್ತ್ಕೊಳಿ, ಎಲ್ಲ ಸರಿ ಹೋಗತ್ತೆ. ಮೊದಲೈದು ವರ್ಷ ಕೆಲ್ಸಾ, ಆಮೇಲೆ, ಒಂದು ಸಾರ್ತಿ, ಏರಿಯಾ ಮ್ಯಾನೇಜರ್ ಆದ್ರೆ, ಮುಗ್ಡೆ ಹೊತು, ಏನು ಕೆಲ್ಸ್ ಇರಲ್ಲ ಗೊತ್ತಾ!“ಹೇಗೆ ಮಹಾನಗರದಲ್ಲಿ, ಜೀವನ ಬಹಳ ಸುಲಭ, ಹೆದ್ರೊ ಅವಶ್ಯಕತೆನೇ ಇಲ್ಲ ಅಂತ, ಅವರಿಗೆಲ್ಲ ಅವನು ಹುರಿದುಂಬಿಸುತಿದ್ದ. ಇದರ ಮಧ್ಯೆ ಹೊಸಬರ ನಡುವೆ, ತನ್ನ ಬುದ್ಧಿವಂತಿಗೆ ತೋರ್ಸಕ್ಕೆ, “ಸಾವಿತ್ರಕ್ಕಾ, ನೀನು ಭಟ್ಟನ್ನ
ಯಾಕೆ ಮದುವೆ ಆಗಿ ನಿಮ್ಮ ಎರಡು ಮೆಸ್ ಗಳನ್ನ್, ಮರ್ಜ್ ಮಾಡ್ ಬಿಡ್‌ಬಾರ್ದೂ? ” ಅಂತ ಹೇಳಿ ತಾನೇ ಜೋರಾಗಿ ನಕ್ಕ. ಅಸಹ್ಯ ವಾಗಿ ಅವನನ್ನೇ ನೋಡಿದ ಸಾವಿತ್ರಮ್ಮ, ಇವನತ್ರೆನು ಮಾತು ಅನ್ನೋ ಹಾಗೆ ಮುಂದೆ ಹೋದಳು.
ನೀರಾವರಿ ಯಲ್ಲದ ಎರಡು ಎಕರೆ ಬಂಜರು ಭೂಮಿ, ಖಾಯಿಲೆ ಇಂದ ಹಾಸಿಗೆ ಹಿಡಿದ ಅಮ್ಮಾ, ಮದುವೆ ಮಾಡಬೇಕಾದ ತಂಗಿ, ಪಟೇಲಂಗೆ ಕೊಡ ಬೇಕಾದ ಎರಡು ಲಕ್ಷ ಸಾಲ, ಹೋದ ಬಾರಿಯೂ ಬೆಲೆ ಬಾರದ ಟೊಮ್ಯಾಟೋ , ಹೀಗೆ ಹೊಸದಾಗಿ ಬಂದಿದ್ದ ಅವರಿಬ್ಬರ ಕಥೆಗಳು ಸುಮಾರಾಗಿ ಒಂದೇ ತರಹದಾಗಿತ್ತು.
ಸುರೇಶ ನ ಮಾತು ಗಳು , ಮಧ್ಯೆ, , ಮಧ್ಯೆ ಅವನು ಫೋನ್ ನಲ್ಲಿ ಮಾತಾಡುತಿದ್ದ, ತೆಲುಗು, ಕನ್ನಡ, ಇಂಗ್ಲೀಷ್, ಗಳು, ತಿಂಗಳಿಗೆ ಹದಿನೈದು ಸಾವಿರ ಸಂಬಳ, ಇವೆಲ್ಲ ನಮ್ಮ ಜೀವನದಲ್ಲಿ ಆದಷ್ಟ್ತು ಬೇಗ ಆಗಿ ಬಿಟ್ಟ್ರೆ ಭಗವಂತ,! ನಮ್ಮ, ನೀನು ಪಾರು ಮಾಡಿದ ಹಾಗೆಂದು ಕೊಂಡು, ಅವರಿಬ್ಬರೂ, ಎಂದೂ ಹಾಕಿರಾದ formals ನ ಬಿಗಿತಕ್ಕೆ, ಕುಳಿತಲ್ಲಿಯೇ ಸಣ್ಣದಾಗಿ, ಬೆವರುತಿದ್ದರು. ಆದಷ್ಟ್ತು
ಬೇಗ ಬೇಗ ಊಟ ಮಾಡಿ ನಾಳೆ ಸುರೇಶ ನ ಆಫೀಸ್ ಗೆ ಹೋಗ ಬೇಕು, ಅಲ್ಲಿ , ಕೆಲಸಕ್ಕೆ ನಮ್ಮನ್ನು ತೊಗೋತರಾ?,
ಕೆಲ್ಸಾ ಸಿಕ್ಕು ಬಿಡ್ಟು ಅಂದ್ರೆ, ಅಪ್ಪಯ್ಯನ್ಗೆ, ಸಕತ್ತು ಖುಷಿ ಆಗ್‌ಬೋದಲ್ಲ ಅಂತ ಒಬ್ಬನು ಯೋಚಿಸ್ತಿದ್ರೆ,
ಮತ್ತೊಬ್ಬನದು ಮತ್ತೊಂದು ಲೋಕ ವಾಗಿತ್ತು.
ಕೆಲಸ ಸಿಕ್ಕ ಕೂಡಲೇ
ಹಳ್ಳೀಗೆ ಹೋಗಿ ಶಾಂತಿ ಯನ್ನ ಕರ್ಕೊಂಡು ಬಂದು ಬಿಡ್ತೀನಿ. “ನೀ ಮನೆ ಬಿಟ್ಟು ಓಡಿ ಬಂದು ಬಿಡು, ಕಷ್ಟ್ಟನೋ ಸುಖನೋ ಸಿಟಿಲಿ ನಾವಿಬ್ರೂ ಸಂಸಾರ ಮಾಡಣ, ಇಲ್ಲಿದ್ರೆ
ನಿಮ್ಮಪ್ಪ ಕುಡುಕ,
ದುಡ್ಡಿನ ಆಸೆಗೆ, ಆ ದುರ್ಗೋಜಿಗೆ ನಿನ್ನ ಮದುವೆ ಮಾಡಿ ಬಿಡ್ತಾನೇ“
ಅಂತ ಹಳ್ಳಿ ಬಿಡುವಾಗ ಶಾಂತಿ ಯ ಕೈ ಹಿಡಿದುಕೊಂಡು , ಗೂಡ್ಸ್ ರೈಲಿನ ಮರೆಯಲ್ಲಿ ಯಾರು ನೋಡಬಾರದೆಂದು
ನಿಂತು ಹೇಳಿದ್ದು ನೆನಪಾಯಿತು. ಊಟ ಸಾಗುತ್ತಿತ್ತು, ಜೊತೆಗೆ ಸುರೇಶ ಹಾಗೂ ಅವನ ಗೆಳೆಯರ ಪ್ರತಾಪ .
ಮೊದಲೊನ್ದು ಆರು ಸಾವಿರ ಸಂಬಳ ಸಿಗಬಹುದು ಅಂತ ಹೇಳಿದ್ದಾನೆ ಸುರೇಶ, ತಿಂಗಳಿಗೆ ಅಪ್ಪಯ್ಯನಿಗೆ ಎರಡು ಸಾವಿರ ಕಳಿಸಿದ್ರೆ, ಸಾಕಾಗತ್ತೆ, ಇನ್ನೂ ಉಳಿದ ನಾಲ್ಕು ಸಾವಿರ ನಂಗೆ ಈ ಉರಿನಲ್ಲಿ ಸಾಕಾಗಬಹುದು ಅಂತ ಅಲ್ಲೇ ರಫ್ ಆಗಿ ಲೆಕ್ಕ ಹಾಕುತಿದ್ದ. ಮನೆಗೆ ಒಂದು ಸಾವಿರ ಕಳಿಸಿದ್ರು, ಇಬ್ಬರ ಸಂಸಾರಕ್ಕೆ, ಐದು ಸಾವಿರ ಸಾಕಾಗಾ ಬಹುದಲ್ವಾ ಅಂತ ಇನ್ನೊಬ್ಬನದು. ಸುರೇಶ ಹಾಗೂ ಅವನ ಸ್ಟೈಲ್ ಅವರಿಬ್ಬರನ್ನೂ ಆವರಿಸಿಬಿಟ್ಟಿತ್ತು. ಇನ್ನಿಬ್ಬರು ಮೆಡಿಕಲ್ ರೆಪ್ ಗಳು,ಇನ್ನರ್ಧ ಗಂಟೆ ಫಾರ್ಮಾ ಕಂಪನಿ, ಹಾಗೂ ಡಾಕ್ಟರ್ ಗಳ ಅನೈತಿಕ ಸಂಬಂಧಗಳ ಬಗ್ಗೆ, ದೊಡ್ಡ ದೊಡ್ಡ ಡಾಕ್ಟರ ಗಳ ಮನೆ ಮೇಲಾದ ಇನ್ ಕಮ್ ಟ್ಯಾಕ್ಸ್ ರೇಡ್ ಬಗ್ಗೆ ಹೇಳುತ್ತಾ ಯಾವುದೋ ಲೋಕಕ್ಕೆ
ಕರ್ಕೊಂಡು ಹೊಗಿಬಿಟ್ರು.
ಊಟ ಮುಗಿದು ಇನ್ನೇನು ಕೈ ತೊಳೆದುಕೊಂಡು ಹೊರಡಬೆಕೆನ್ನೊದರಲ್ಲಿ, ” ಸುರೇಶ ಅಂದ್ರೆ ಯಾರಪ್ಪ“, ಅಂತ ಕೇಳಿಕೊಂಡು ಒಬ್ಬ ದಾಡಿಯವನು ಒಳಗೆ ಬಂದ, ಏನು ಏನು ಅಂತ ಸುರೇಶ ಕೇಳ್ತಿದ್ರೆ, “ಗುರು ಏನು ನೀನು ಫೈನಾನ್ಸ್ ಲೋನು ಕಟ್ಟ್‌ತಿಯ ಇಲ್ವಾ ಹೇಗೆ?, ನಿನ್ನ್ ಗಾಡಿನ ಸೀಜ್ ಮಾಡಿದೀವಿ, ನಾಳೆ ಆಫೀಸಿಗೆ ಗೆ ಬಾ“ ಅಂತ ಹೇಳಿಹೋರಟೆ ಹೋದ .ಸುರೇಶ ನ ಮಾತುಗಳೆಲ್ಲ ಗಂಟಲಲ್ಲೇ ಉಳಿದು ಹೋದವು, ಗಂಟೆ ಆಗಲೇ ಹನ್ನೊಂದಾಗಿತ್ತು. ಮತ್ತೇನ್ ಮಾಡ್ ಬೇಕೆಂದು ಯೋಚಿಸೋದ್ರಲ್ಲಿ, ಸುರೇಶ ನ ಇನ್ನಿಬ್ಬ್ರರು ಗೆಳೆಯರು ”ಬರ್ತೀನಿ ಗುರು, ನಂಗೆ ಲೇಟ್ ಆಗತ್ತೆ ”ಅಂತ ಹೊರಟೆ ಹೊದ್ರು. ಏನಾಗ್ತಿದೆ ಅಂತ ಕಕ್ಕಾಬಿಕ್ಕಿ ಯಾಗಿದ್ದರು ಇವರಿಬ್ಬರೂ. “ಅಣ್ಣ ನಿಮ್ಮ್ ಆಪಿಸಿಗೆ ನಾಳೆ ಬರದಾ ”ಅಂತ ಕೇಳಿದ್ರೆ, “ಏಯ್, ನಂ ತಲೆ ತಿನ್ನ ಬೆಡ್ರಪ್ಪಾ“ ಅಂತ, ಸುರೇಶ ಆಟೋ ಹತ್ತಿ ಹೋಗೆ ಬಿಟ್ಟ., ಈ ಊಟದ ದುಡ್ಡನ್ನ ಯಾರತ್ರ ವಸೂಲಿ ಮಾಡದು ಅಂತ ಸಾವಿತ್ರಮ್ಮ ಯೋಚ್ನೆ
ಮಾಡಕ್ಕೆ ಶುರು ಮಾಡಿದ್ಲು….

