ಅರ್ಥ- ಅನರ್ಥ

 

ಮೊನ್ನೆ ಇದ್ದಕ್ಕಿದ್ದ ಹಾಗೆ, ಎಲ್ಲಿಂದಲೋ ಪ್ರತ್ಯಕ್ಷನಾದ ಅವನು ‘ಒಂದು ಅಮೆರಿಕನ್ ಡಾಲರ್ ಒಂದು ಭಾರತೀಯ ರೂಪಾಯಿಗೆ ಸಮ ಅಂತ ಸರ್ಕಾರ ಘೋಷಿಸಿಬಿಟ್ರೆ, ನಮ್ಮ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತೆ ಅಲ್ವಾ?’ ಅಂತ ಹೇಳಿಬಿಟ್ಟ. ಅದು ಹಾಗಲ್ಲಪ್ಪ ಅಂತ ನಾನು, ಗೋಲ್ಡ್ ಸ್ಟ್ಯಾಂಡರ್ಡ್, ಬ್ರೆಟನ್ ವುಡ್, ಫ್ರೀ ಫ್ಲೋಟ್ ಅಂತ ನನಗೆ ಗೊತ್ತಿರುವ ಅರ್ಥಶಾಸ್ತ್ರದ ಥಿಯರೀ ಎಲ್ಲ ಹೇಳಿದರೂ, ಅವನು ಕನ್ವಿನ್ಸ್ ಆದ ಹಾಗೆ ಕಾಣಲಿಲ್ಲ. ‘ತಮ್ಮ ದೇಶದ ಉತ್ಪನ್ನಗಳಿಗೆ ಹೆಚ್ಚು ಹೆಚ್ಚು ದುಡ್ಡು ಬರಲಿ ಅಂತ, ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳು ಹಾಗೂ ಅವುಗಳ ಚೇಲಾಗಳಾದ ಬಹುರಾಷ್ಟ್ರೀಯ ಕಂಪನಿಗಳು ನಡೆಸುತ್ತಿರುವ ಹುನ್ನಾರ, ಇದಕ್ಕೆ ನಮ್ಮ ಸರ್ಕಾರಗಳು ತಲೆ ಬಾಗುತ್ತಿವೆ’ ಅಂತ ಮತ್ತೊಂದು ಅನಾಹುತಕಾರಿ ಹೇಳಿಕೆ ಕೊಟ್ಟು ಸುಮ್ಮನಾಗಿ ಬಿಟ್ಟ.

ಇವನ ಮಾತು ಕೇಳಿ ನನಗೆ ಕೆಲ ವರ್ಷಗಳ ಹಿಂದೆ ಮೌಲ್ಯ ವರ್ಧಿತ ತೆರಿಗೆ(VAT) ಯನ್ನು ಅಳವಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದಾಗ, ಸ್ವದೇಶಿ ಚಳುವಳಿಯ ಬಹುಮುಖ್ಯ ವಕ್ತಾರರೊಬ್ಬರು ‘ವ್ಯಾಟ್ ಅಳವಡಿಸುವ ಸರ್ಕಾರದ ಉದ್ದೇಶದ ಹಿಂದೆ ಮುಂದುವರೆದ ರಾಷ್ಟ್ರಗಳ ಪಿತೂರಿಯಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರಿಗೆ ತೊಂದರೆಯುಂಟಾಗುತ್ತದೆ’ ಎಂದು ರಾಜ್ಯದ ಪ್ರಮುಖ ನಗರಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಘಂಟಾಘೋಷವಾಗಿ ಹೇಳಿದ್ದು ನೆನಪಾಯಿತು.

ಸರ್ಕಾರದ ಈ ಪಾಲಿಸಿಗಳು ಯಾವುದೇ ಲೋಪ ದೋಷಗಳು ಇಲ್ಲದ್ದು ಅಂತ ಹೇಳುವುದು ನನ್ನ ಉದ್ದೇಶವಲ್ಲ. ಆದರೆ, basic understanding ಇಲ್ಲದೆಯೇ, ದೊಡ್ಡ ಮಟ್ಟದ ಚರ್ಚೆಗಳನ್ನು ಹುಟ್ಟುಹಾಕುವವರ ಹಾಗೂ misinformation campaign ಗಳನ್ನು ಯಶಸ್ವಿಯಾಗಿ ನಡೆಸುವವರ ಬಗ್ಗೆ ನನ್ನ ಆಕ್ಷೇಪ.
                          ************************************

ವಿಶ್ವಬ್ಯಾಂಕ್ ನ ಇತ್ತೀಚಿನ ವರದಿಗಳ ಪ್ರಕಾರ, ಪ್ರಪಂಚದಲ್ಲಿ ಅತಿ ಹೆಚ್ಚಿನ ಬಡವರ ಸಂಖ್ಯೆಯಿರುವುದು ಭಾರತದಲ್ಲಿ. ಸುಮಾರು 460 ಮಿಲಿಯನ್. ಅಂದರೆ ನಮ್ಮ ಜನಸಂಖ್ಯೆಯ ಶೇಕಡ 42 ರಷ್ಟು. ವಿಶ್ವಬ್ಯಾಂಕ್ ಪ್ರಕಾರ ದಿನಕ್ಕೆ 1.25 ಅಮೆರಿಕನ್ ಡಾಲರ್ ಗಿಂತ (ಅಂದಾಜು, ಭಾರತದ 55 ರೂಪಾಯಿಗಳು) ಕಡಿಮೆ ಆದಾಯ ಇರುವವನು ಬಡವನು ಎಂದು. ಆದರೆ ಏಶಿಯನ್ ಡೆವೆಲಪ್‌ಮೆಂಟ್ ಬ್ಯಾಂಕ್ ನ  ಪ್ರಕಾರ ಒಬ್ಬ ವ್ಯಕ್ತಿಯ ಆದಾಯ ದಿನಕ್ಕೆ ಅಮೆರಿಕನ್ ಡಾಲರ್ 1.35 ಕ್ಕಿಂತ ಕಡಿಮೆಯಿದ್ದರೆ ಅವನು ಬಡವ. ಇದರ ಪ್ರಕಾರ ಭಾರತದಲ್ಲಿ ಸುಮಾರು 600 ಮಿಲಿಯನ್ ಬಡವರಿದ್ದಾರೆ.

ಆದರೆ ಭಾರತ ಸರ್ಕಾರದ ಲೆಕ್ಕಾಚಾರವೇ ಬೇರೆ. ನಮ್ಮಲ್ಲಿ ಬಡತನವನ್ನು ಪ್ರತಿ ದಿನ ವ್ಯಕ್ತಿಯೊಬ್ಬ ತೆಗೆದುಕೊಳ್ಳುವ ಆಹಾರದ ಕ್ಯಾಲೊರಿ ಪ್ರಮಾಣ ಆಧರಿಸಿ ನಿರ್ಧರಿಸಲಾಗುತ್ತದೆ. ಇದರ ಪ್ರಕಾರ ನಮ್ಮಲ್ಲಿ ಇರುವ ಬಡವರ ಸಂಖ್ಯೆ 300 ಮಿಲಿಯನ್! ಆದರೆ ಈ ಮುನ್ನೂರು ಮಿಲಿಯನ್ ಸಂಖ್ಯೆಯಲ್ಲಿ SIZE ZERO ಹೊಂದಲು ಕಸರತ್ತು ನಡೆಸಿ ಊಟ ಬಿಟ್ಟಿರುವ, ನಮ್ಮ ಚಲನಚಿತ್ರ ತಾರೆಯರು, ಹಾಗೂ ಬೆಕ್ಕಿನ ನಡಿಗೆಯ ಬೆಡಗಿಯರ ಸಂಖ್ಯೆಯೂ ಸೇರಿದೆಯೊ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ!!!!

(ಕೆಂಡಸಂಪಿಗೆ ಗಾಗಿ ಬರೆದದ್ದು  ಸೆಪ್ಟೆಂಬರ್ ೨೦೦೮)

ಸ್ಕರ್ಟ್‌ನ ಉದ್ದ ಮತ್ತು ಶೇರು ಸೂಚ್ಯಂಕ

ಶೇರು ಮಾರುಕಟ್ಟೆಗೂ ಸ್ಕರ್ಟ್‌ನ ಉದ್ದಕ್ಕೂ (length) ಏನಾದರೂ ಸಂಬಂಧ ಇದೆಯಾ? ನಗ ಬೇಡಿ. ಅಥವಾ ಇದೆಂತಹ ಅಸಂಬದ್ಧ ವಾದವಿರಬಹುದೆಂದು ಅನಿಸುತ್ತಿದೆಯೇ?
ಹೌದು, ಆ ತರಹದೊಂದು ಥಿಯರಿ ಇದೆ. ಅದನ್ನು Hemline Theory/Indicator ಎಂದು ಕರೆಯಲಾಗುತ್ತದೆ. ರಾಲ್ಪ್ ರಾಟ್ನಂ ಎಂಬ ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರನಿಂದ ರೂಪಿಸಲ್ಪಟ್ಟ ಹಾಗೂ ಪ್ರಚಲಿತಗೊಂಡ ಈ ಸಿದ್ದಾಂತ, ಶೇರು ಮಾರುಕಟ್ಟೆಗೆ ಸಂಬಂಧಪಟ್ಟ ಅನೇಕ ಘಟಾನುಘಟಿಗಳಿಂದಲೇ ಭೇಷ್! ಎನಿಸಿಕೊಂಡಿದೆ.

ಈ ಥಿಯರಿ ಬಹಳ ಸರಳವಾದದ್ದು. ಹೆಂಗಸರು ಅಥವಾ ಹುಡುಗಿಯರು ಧರಿಸುವ ಸ್ಕರ್ಟ್‌ನ ಉದ್ದ ಚಿಕ್ಕದಾದಂತೆ ಶೇರು ಮಾರುಕಟ್ಟೆಯ ಸೂಚ್ಯಂಕ ಮೇಲೇರುತ್ತದೆ. ಹಾಗೂ ಉದ್ದವಾದಂತೆ ಸೂಚ್ಯಂಕ ಕೆಳಗಿಳಿಯುತ್ತದೆ. ಮೇಲ್ನೋಟಕ್ಕೆ ಸಂಬಂಧವೆ ಇಲ್ಲದಂತೆ ಕಂಡರೂ, ಇದರ ಹಿಂದೆ, ಜನರ ಸಾಮಾಜಿಕ ಸ್ಥಿತಿ ಗತಿ, ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಶೇರು ಮಾರುಕಟ್ಟೆಯ ಸೂಚ್ಯಂಕದೊಡನೆ ಸಮೀಕರಿಸುವ ಒಂದು ಪ್ರಯತ್ನವಿದೆ. ರಾಲ್ಪ್‌ನ ಪ್ರಕಾರ ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾದಂತೆ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಅವರು ಹೆಚ್ಚು ಸಂತೋಷದಾಯಕವಾಗಿರುತ್ತಾರೆ, ಇದು ಅವರ ವರ್ತನೆಯಲ್ಲಿ, ಧರಿಸುವ ಧಿರಿಸಿನಲ್ಲಿ ವ್ಯಕ್ತಗೊಳ್ಳುತ್ತದೆ, ಜೀವನ ಶೈಲಿ ಬಹು ಮಟ್ಟಿಗೆ ಬದಲಾವಣೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಫ್ಯಾಶನ್ ಪ್ರಪಂಚದಲ್ಲೂ ಬದಲಾವಣೆಯ ಗಾಳಿ ಬೀಸುತ್ತದೆ. ಸ್ಕರ್ಟ್‌ನ ಉದ್ದದಲ್ಲಿ ವ್ಯತ್ಯಾಸವಾಗುತ್ತಾ ಹೋಗುತ್ತದೆ, ಮಿನಿ ಹಾಗೂ ಮೈಕ್ರೋ ಸ್ಕರ್ಟ್‌ಗಳ ಬಳಕೆ ಹೆಚ್ಚಾಗತೊಡಗುತ್ತದೆ.

೧೯೨೦ ಹಾಗೂ ೧೯೬೦ ರ ದಶಕದ ಅಮೇರಿಕದ ಶೇರು ಮಾರುಕಟ್ಟೆಯ ಅಧ್ಯಯನವನ್ನು ಹಾಗೂ ಅಂದಿನ ದಿನಗಳಲ್ಲಿ ಚಾಲ್ತಿಯಿದ್ದ, ಫ್ಯಾಶನ್‌ನ ಅಧ್ಯಯನ ಮಾಡಿ ಸ್ಕರ್ಟ್‌ನ ಉದ್ದ ಹಾಗೂ ಶೇರು ಮಾರುಕಟ್ಟೆಯ ಪರಿಸ್ಥಿತಿಗೆ ಬಹಳ ನೇರವಾದ ಸಂಬಂಧವಿದೆಯೆಂದು ಸಾರಿತು ಈ ಸಿದ್ದಾಂತ. ಉತ್ತಮಗೊಂಡ ಆರ್ಥಿಕ ಪರಿಸ್ಥಿತಿ ಜನರನ್ನು ಹೆಚ್ಚು ಹೆಚ್ಚು ಖರ್ಚು ಮಾಡುವಂತೆ ಪ್ರೇರೇಪಿಸುತ್ತದೆ, ಹಾಗೂ ಮಾರುಕಟ್ಟೆಯಲ್ಲಿ ಹೆಚ್ಚಾದ ಹಣದ ಪ್ರಮಾಣ (Liquidity factor) ಶೇರು ಮಾರುಕಟ್ಟೆಗೂ ಹರಿದು ಸೂಚ್ಯಂಕ ಮೇಲೇರುವಂತೆ ಮಾಡುತ್ತದೆ.

ಇದೆಂತಹ ಥಿಯರಿ? ಆರ್ಥಿಕ ಪರಿಸ್ಥಿತಿಯೊಂದೆ ಅಲ್ಲ, ಹವಾಮಾನ ಬದಲಾವಣೆಯೂ ಸಹ ಜನರು ಧರಿಸುವ ವಸ್ತ್ರಗಳನ್ನು ನಿರ್ಧರಿಸುತ್ತದೆ, ಡಿಸೆಂಬರ್ ತಿಂಗಳಿನ ಚಳಿಯಲ್ಲಿ ಯಾರಾದರೂ ಮಿನಿ ಸ್ಕರ್ಟ್ ಧರಿಸಲು ಸಾಧ್ಯವೇ? ಹಾಗಾದರೆ ಪ್ರತಿ ಚಳಿಗಾಲದಲ್ಲೂ ಶೇರು ಮಾರುಕಟ್ಟೆ ಬೀಳುತ್ತದೆಯೇ? ಎಂದೆಲ್ಲ ಟೀಕಾಕಾರರು ಪ್ರಶ್ನಿಸಿದ್ದಾರೆ. ಈ ಥಿಯರಿಯನ್ನು ನೇರವಾಗಿ ಭಾರತದಂತಹ, ಸ್ವಲ್ಪ ಮಟ್ಟಿನ ಮಡಿವಂತ ಹಾಗೂ, ಉದ್ದಗಲಕ್ಕೂ ವೈವಿಧ್ಯಮಯವಾದ ಉಡುಪನ್ನು ಧರಿಸುವ ಜನರಿರುವ ದೇಶದಲ್ಲಿ ಪರೀಕ್ಷಿಸಲು ಸಾಧ್ಯವಾಗದೆಂಬುದು ವಾಸ್ತವ. ವಾದ ವಿವಾದಗಳು ಏನೇ ಇದ್ದರೂ, ಇವತ್ತಿಗೂ ಶೇರು ಮಾರುಕಟ್ಟೆಯ ಹುಚ್ಚಿರುವ ಜನರನ್ನು, ಡಿಸೆಂಬರ್‌ನ ಚಳಿ ಹಾಗೂ ಏಪ್ರಿಲ್‌ನ ಬಿರುಬಿಸಿಲಿನಲ್ಲೂ ಈ ಥಿಯರಿ ಮತ್ತೆ ಮತ್ತೆ ತನ್ನೆಡೆ ಸೆಳೆಯುತ್ತದೆ.

(ಕೆಂಡಸಂಪಿಗೆ ಗಾಗಿ ಬರೆದದ್ದು -೩೧ ಜುಲೈ ೨೦೦೮)